ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ :
ಸಮುದಾಯದ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಲು ಮತ್ತು ಶಿಕ್ಷಣದಲ್ಲಿ ಸಮುದಾಯದ ಭಾಗವಹಿಸುವಿಕೆಗಾಗಿ ಸರ್ಕಾರವು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಹೊಂದುವ ಈ ವ್ಯವಸ್ಥೆಯನ್ನು ವಿರಚಿಸಿದೆ. ಸದರಿ ಸಮಿತಿಯಲ್ಲಿ ಇತರರನ್ನು ಹೊರತುಪಡಿಸಿ 9 ಮುಖ್ಯ ಸದಸ್ಯರು ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರಾಗಿರುತ್ತಾರೆ.
ಶಾಲೆಗಳ ಉತ್ತಮ ನಿರ್ವಹಣೆಗಾಗಿ ಶೈಕ್ಷಣಿಕ ಮತ್ತು ಶಾಲಾಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಲು ಎಸ್.ಡಿ.ಎಂ.ಸಿ. ಸಮಿತಿಗಳಿಗೆ ಕೆಲವು ಕರ್ತವ್ಯಗಳನ್ನು ಹಾಗೂ ಅಗತ್ಯ ಅಧಿಕಾರಗಳನ್ನು ನೀಡಲಾಗಿದೆ. ಶಾಲೆಯ ಮುಖ್ಯ ಶಿಕ್ಷಕರು ಸಮಿತಿಯ ಕಾರ್ಯದರ್ಶಿಗಳಾಗಿರುತ್ತಾರೆ. ಪ್ರಸ್ತುತ ವ್ಯವಸ್ಥೆಯನ್ನು ಸರ್ಕಾರದ ಕಾರ್ಯಕಾರಿ ಆದೇಶದನ್ವಯ ನಿರ್ವಹಿಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಗಳ ಸಹಯೋಗದೊಂದಿಗೆ ಸದರಿ ಸಮಿತಿಗಳನ್ನು ಇನ್ನೂ ಬಲವರ್ಧಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಪಂಚಾಯತ್ ರಾಜ್ ಸಂಸ್ಥೆಯ ಉಪ ಸಮಿತಿಗಳನ್ನಾಗಿ ರಚಿಸುವ ಬಗ್ಗೆ ಸರ್ಕಾರದಲ್ಲಿ ಪ್ರಸ್ತಾಪಿಸಲಾಗುತ್ತಿದೆ.