ಉಚಿತ ಸಮವಸ್ತ್ರ ಮತ್ತು ಶಾಲಾಬ್ಯಾಗ್ :

ಭಾರತೀಯ ಸಂವಿಧಾನದ ಆನುಚ್ಛೇದ-45ರ ಪ್ರಕಾರ 14 ವರ್ಷದವರೆಗಿನ ಮಕ್ಕಳಿಗೆ ಕಡ್ಡಾಯವಾಗಿ ಉಚಿತ ಪ್ರಾಥಮಿಕ ಶಿಕ್ಷಣ ನೀಡುವುದು ರಾಜ್ಯಸರ್ಕಾರಗಳ ನಿರ್ದೇಶಿತ ಪ್ರಮುಖ ಕಾರ್ಯನೀತಿಗಳಲ್ಲಿ ಒಂದಾಗಿರುತ್ತದೆ. ಪ್ರಮುಖವಾಗಿ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀರಣಕ್ಕಾಗಿ ಕಡ್ಡಾಯ ಪ್ರಾಥಮಿಕ ಶಿಕ್ಷಣದಲ್ಲಿ ಮಹತ್ವದ ಗುರಿಯನ್ನು ಸಾಧಿಸಲು ಅನುಕೂಲವಾಗುವ ಉದ್ಯೇಶದಿಂದ ಕೇವಲ ಹಾಜರಾತಿಯ ಕ್ರಮವನ್ನು ಶಿಕ್ಷಣ ಸಾರ್ವತ್ರೀಕರಣದ ಮೂರು ಮುಖ್ಯ ದಿಕ್ಕುಗಳಾಗಿ ವಿಂಗಡಿಸಿದೆ. ಅವು: ಮಕ್ಕಳ ದಾಖಲಾತಿ, ಕಲಿಕೆಯಲ್ಲಿನ ಗುಣಮಟ್ಟ ಹಾಗೂ ಧಾರಣಾ ಶಕ್ತಿ ಎಂದು ಮೂರು ಅಳತೆಗೋಲಾಗಿ ನಿರ್ಧರಿಸಲಾಗಿದೆ.

ಸಂವಿಧಾನದ ನಿರ್ದೇಶಿತ ಅಂಶಗಳಲ್ಲದೆ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಒಬ್ಬರಿಗಿಂತ ಒಬ್ಬರು ಮುಂದಾಗಿ ಪ್ರಾಮುಖ್ಯತೆ ಮೇರೆಗೆ ಅನುಕ್ರಮವಾದ ಯೋಜನೆಗಳನ್ನು ರೂಪಿಸುವಲ್ಲಿ ನಿರತರಾಗಿದ್ದು, ಇಂತಹ ಅನುಕರಣೆಗಳಿಂದ ಹಾಗೂ ಸರ್ಕಾರಗಳ ಪರಿಶ್ರಮದಿಂದಾಗಿ ಹಲವಾರು ರೀತಿಯಲ್ಲಿ ಪ್ರಾಥಮಿಕ ಹಂತದಲ್ಲಿ ಅಭಿವೃದ್ಧಿಯನ್ನು ಸಾಧಿಸಲಾಗಿರುತ್ತದೆ.

ಪ್ರಾಥಮಿಕ ಹಂತದಲ್ಲಿ ಶಾಲೆಗಳಲ್ಲಿ ಮಕ್ಕಳು ದಾಖಲಾಗದಿರಲು ಅಥವಾ ಭಾಗವಹಿಸದಿರಲು ಕುಟುಂಬದ ಬಡತನ ಹಾಗೂ ಆರ್ಥಿಕ ಸಂಕಷ್ಟವೇ ಕಾರಣವಾಗಿರುತ್ತದೆ. ಈ ಕಾರಣಗಳು ಸರ್ಕಾರಗಳ ವಿಶೇಷ ಕೋರಿಕೆ ಎಂದು ಪರಿಗಣಿಸಿ ಇಂತಹ ಸಮಸ್ಯೆಗಳಲ್ಲಿ ಸರ್ಕಾರ ವಿಶೇಷವಾಗಿ ಮಧ್ಯಸ್ಥಿಕೆ ವಹಿಸಿ ಮಕ್ಕಳು ಶಾಲೆಯನ್ನು ತೊರೆಯದಂತೆ ಅಥವಾ ಶಾಲೆಗಳಿಗೆ ಆಕರ್ಷಿತರಾಗುವಂತೆ ಯೋಜನೆಗಳನ್ನು ರೂಪಿಸುವ ಮೂಲಕ ಶಾಲೆಗಳಲ್ಲಿ ಉತ್ತಮ ಹಾಜರಾತಿಗೆ ಅವಕಾಶವಾಗಿರುತ್ತದೆ.

ವಿಸ್ತರಿಸಿದ ಶಾಲಾ ಸೌಕರ್ಯಗಳು ಇದೀಗ ಕನಿಷ್ಠ ವರಮಾನದ ಕುಟುಂಬದಲ್ಲಿನ ಹೆಚ್ಚು ಹೆಚ್ಚು ಮಕ್ಕಳೂ ಸಹ ಶಾಲೆಗಳಿಗೆ ದಾಖಲಾಗಲು ಅನುಕೂಲವಾಗಿರುತ್ತದೆ. ಹೀಗೆ ದಾಖಲಾದ ಮಕ್ಕಳು ಕಡ್ಡಾಯ ಪ್ರಾಥಮಿಕ ಹಂತವನ್ನು ಪೂರ್ಣಗೊಳಿಸುವವರೆಗೆ ಶಾಲೆಯಲ್ಲಿ ಉಳಿಯಲು ಸರ್ಕಾರದ ಮಹತ್ವದ ಯೋಜನೆಗಳಾದ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಉಚಿತ ಶಾಲಾಬ್ಯಾಗ್ ಹಾಗೂ ನಿಯಮಿತವಾದ ಮಕ್ಕಳ ಆರೋಗ್ಯ ತಪಾಸಣಾ ಕಾರ್ಯಕ್ರಮಗಳು ಸಹಕಾರಿಯಾಗಿರುತ್ತದೆ.

ಉಚಿತ ಸಮವಸ್ತ್ರವಿತರಣೆಯ ಮುಖ್ಯ ಉದ್ಯೇಶಗಳು :

  • 14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವುದು.
  • 14 ವರ್ಷದ ಒಳಗಿನ ಎಲ್ಲಾ ಮಕ್ಕಳೂ ಶಾಲೆಗೆ ಕಡ್ಡಾಯವಾಗಿ ದಾಖಲಾಗಲು ಆಕರ್ಷಿಸುವುದು, ಹಾಗೂ ದಾಖಲಾದ ಮಕ್ಕಳು ಮಧ್ಯದಲ್ಲಿ ಶಾಲೆ ತೊರೆಯದಂತೆ ನೋಡಿಕೊಳ್ಳುವುದು.
  • ಎಲ್ಲಾ ಮಕ್ಕಳಲ್ಲಿ ಏಕತೆ ಮತ್ತು ಶಿಸ್ತು ರೂಪಿಸುವುದು.

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಪೂರೈಕೆ ಯೋಜನೆಯು ದೇಶದ ಸ್ವಾತಂತ್ರ್ಯ ಪೂರ್ವದಲ್ಲೂ ಸಹ ಜಾರಿಯಲ್ಲಿತ್ತು, ಆದಾಗ್ಯೂ ರಾಜ್ಯ ಸರ್ಕಾರ ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀತಿ ಜಾರಿಗೆ ತಂದಾಗ ಅನೇಕ ವಿಚಾರಗಳನ್ನು ಪರಾಮರ್ಶಿಸಿ ಹಾಗೂ ಸತತ ಪ್ರಯತ್ನಗಳ ಮೂಲಕ ಸಮವಸ್ತ್ರ ಪೂರೈಕೆಯನ್ನು ಒಂದು ಪ್ರೋತ್ಸಾಹದಾಯಕ ಕಾರ್ಯಕ್ರಮವಾಗಿ 1961ನೇ ಸಾಲಿನಿಂದ ಜಾರಿಗೆ ತರಲಾಯಿತು.

ರಾಜ್ಯದಲ್ಲಿ ಕರ್ನಾಟಕ ಸರ್ಕಾರ ವಿದ್ಯಾವಿಕಾಸ ಯೋಜನೆಯಡಿ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಗುತ್ತಿದೆ. ಹೀಗೆ ವಿತರಿಸಲಾಗುವ ಸಮವಸ್ತ್ರ ಬಟ್ಟೆಗಳನ್ನು ಪ್ರತಿ ತರಗತಿವಾರು ವಿವಿಧ ಅಳತೆಗಳಲ್ಲಿ ಸರಬರಾಜು ಮಾಡಲಾಗುತ್ತಿದೆ, ಈ ರೀತಿ ವಿವಿಧ ಅಳತೆಯನ್ನು ತರಗತಿ-1 ಮತ್ತು 2ನೇ ತರಗತಿ ಗಂಡು ಮತ್ತು ಹೆಣ್ಣುಮಕ್ಕಳಿಗೆ(ಅಳತೆ-1), 3 ಮತ್ತು 4ನೇ ತರಗತಿ ಗಂಡು ಮತ್ತು ಹೆಣ್ಣುಮಕ್ಕಳಿಗೆ(ಅಳತೆ-2), 5 ರಿಂದ 7ನೇ ತರಗತಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ(ಅಳತೆ-3), 8 ರಿಂದ 10ನೇ ತರಗತಿ ಗಂಡು ಮಕ್ಕಳಿಗೆ ಹಾಗೂ 8ನೇ ತರಗತಿಯ ಹೆಣ್ಣು ಮಕ್ಕಳಿಗೆ(ಅಳತೆ-4), 9 ಮತ್ತು 10ನೇ ತರಗತಿ ಹೆಣ್ಣು ಮಕ್ಕಳಿಗೆ(ಅಳತೆ-5), ಈ ರೀತಿಯಾಗಿ ಸಮವಸ್ತ್ರಗಳನ್ನು ಸರಬರಾಜು ಮಾಡಲಾಗುತ್ತಿದೆ.