ಅನುಷ್ಠಾನದ ಜವಾಬ್ದಾರಿ :
ಶಾಲಾ ಹಂತದಲ್ಲಿ ಎಸ್.ಡಿ.ಎಂ.ಸಿ.,ಯವರು ಹಾಗೂ ಮುಖ್ಯ ಅಡುಗೆಯವರು ಕಾರ್ಯಕ್ರಮದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನಿರ್ದೇಶನ ಹಾಗೂ ಮಾರ್ಗದರ್ಶಿ ಸೂಚನೆಯಂತೆ ತಾಯಿಯಂದಿರ ಸಮಿತಿಯನ್ನು ಶಾಲೆಗಳಲ್ಲಿ ರಚಿಸಲಾಗಿದ್ದು, ಪ್ರತಿ ದಿನವೂ ಒಬ್ಬ ವಿದ್ಯಾರ್ಥಿಯ ತಾಯಿ ಅಡುಗೆಯ ಮೇಲ್ವಿಚಾರಣೆ ಹಾಗೂ ಊಟದ ರುಚಿ ನೋಡಿ ಬಡಿಸುವುದರಲ್ಲಿ ಪಾಲ್ಗೊಳ್ಳುವುದರ ಮೂಲಕ ಮಕ್ಕಳು ತಮ್ಮ ಮನೆಯ ವಾತಾವರಣದಂತೆ ಭಾವಿಸಿಕೊಂಡು ವರಾಂಡದಲ್ಲಿ/ಕೋಣೆಯಲ್ಲಿ ಕುಳ್ಳಿರಿಸಿ ಮುಖ್ಯ ಶಿಕ್ಷಕರು/ಶಿಕ್ಷಕರ ಉಸ್ತುವಾರಿ ಊಟ ನೀಡಲಾಗುತ್ತದೆ. ಊಟಕ್ಕೆ ಮುಂಚೆ ಶಿಕ್ಷಕರು ಕಡ್ಡಾಯವಾಗಿ ರುಚಿ ನೋಡಿ, ರುಚಿ ಪುಸ್ತಕದಲ್ಲಿ ದಾಖಲಿಸಲಾಗುತ್ತಿದೆ. ಊಟಕ್ಕೆ ಮುಂಚೆ ಮತ್ತು ನಂತರ ಸೋಪು ಬಳಸಿ ಕೈ ತೊಳೆಯುವ ಉತ್ತಮ ಅಭ್ಯಾಸವನ್ನು ರೂಢಿಸಲಾಗಿದೆ. ಮುಖ್ಯ ಶಿಕ್ಷಕರು ಹಾಗೂ ತರಗತಿ ಶಿಕ್ಷಕರು/ದೈಹಿಕ ಶಿಕ್ಷಕರು /ಊಟದ ವೇಳೆಯಲ್ಲಿ ಕಡ್ಡಾಯವಾಗಿ ಊಟದ ವಿತರಣೆಯ ಉಸ್ತುವಾರಿ ವಹಿಸಿ, ಯಾವುದೇ ಸಮಸ್ಯೆಯಿಲ್ಲದಂತೆ ಮಕ್ಕಳು ಊಟ ಪಡೆಯುವಂತೆ ಕ್ರಮ ವಹಿಸುವುದು. ಅನುಪಯುಕ್ತ ಹಳೆಯ ವಸ್ತುಗಳನ್ನು ತೆಗೆದು ಹಾಕುವುದು. ಕಾರ್ಯಕ್ರಮದ ಬಗ್ಗೆ ನಿರಂತರ ಗಮನ ಹರಿಸುವುದು. ಅಡುಗೆಯವರು ಅಡುಗೆ ತಯಾರಿಸುವ ಹಾಗೂ ಬಡಿಸುವಾಗ ಏಪ್ರಾನ್ ಬಳಸುವುದು. ನೀರು ಹಾಗೂ ಆಹಾರ ಧಾನ್ಯ, ತರಕಾರಿಗಳ ಸ್ವಚ್ಛತೆ ಬಗ್ಗೆ ನಿಗಾ ವಹಿಸುವುದು. ಶಾಲಾ ಎಸ್.ಡಿ. ಎಂ.ಸಿ.,ಸಭೆಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಖರ್ಚು ವೆಚ್ಚದ ಬಗ್ಗೆ ಪರಿಶೀಲಿಸಿ, ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ವಿವರಗಳನ್ನು ದಾಖಲಿಸುತ್ತದೆ ಹಾಗೂ ಶಾಲೆಗೆ ಭೇಟಿ ನೀಡಿರುವ ಅಧಿಕಾರಿಗಳು ಕಡ್ಡಾಯವಾಗಿ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಬಗ್ಗೆ ಪರಿಶೀಲಿಸಿ ವರದಿಯಲ್ಲಿ ದಾಖಲಿಸಬೇಕಾಗಿರುತ್ತದೆ..
ಶಾಲಾ ಮಟ್ಟದಲ್ಲಿ ಸುರಕ್ಷತೆ :
ಮಧ್ಯಾಹ್ನ ಉಪಹಾರ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ಕಾಯ್ರಕ್ರಮದ ಅನುಷ್ಡಾನದಲ್ಲಿ ಹೆಚ್ಚಿನ ಕಾಳಜಿ, ಜವಾಬ್ದಾರಿ ವಹಿಸುವುದು ಎಲ್ಲಾ ಸ್ಥರದ ಅಧಿಕಾರಿ/ಸಿಬ್ಬಂದಿಯವರ ಜವಾಬ್ದಾರಿಯಾಗಿದ್ದು, ಸುತ್ತೋಲೆ/ಆದೇಶ/ಮಾರ್ಗಸೂಚಿಗಳಂತೆ ಹಾಗೂ ಈ ಕೆಳಗೆ ಸೂಚಿಸಿರುವ ಕರ್ತವ್ಯಗಳಲ್ಲಿನ ಮಕ್ಕಳ ಸುರಕ್ಷತೆಗಾಗಿ ಜವಾಬ್ದಾರಿಗಳನ್ನು ನಿರ್ವಹಿಸುವರು.
ಅಡುಗೆಯನ್ನು ಮಕ್ಕಳಿಗೆ ಊಟ ಬಡಿಸುವ ಅರ್ಧ ಘಂಟೆ ಮುಂಚಿತವಾಗಿ ತಯಾರಿಸಿ ದೊಡ್ಡ ಪಾತ್ರೆಗಳಿಂದ ಚಿಕ್ಕ ಪಾತ್ರೆಗಳಿಗೆ ಬದಲಾಯಿಸಿಕೊಂಡು ಒಂದನೇ ತರಗತಿಯ ಮಕ್ಕಳೂ ಸಹ ಸರಾಗವಾಗಿ ಊಟ ಮಾಡಲು ಸಾಧ್ಯವಾಗುವಷ್ಟು ಬಿಸಿ ಇರುವಂತೆ ನೋಡಿಕೊಂಡು ಬಡಿಸತಕ್ಕದ್ದು. ಅಡುಗೆ ಕೋಣೆಯೊಳಗೆ ಯಾವ ಮಕ್ಕಳೂ ಯಾವುದೇ ಕಾರಣಕ್ಕೂ ಹೋಗದಂತೆ ನಿಷೇಧಿಸುವುದು.ಅಡುಗೆಯವರು ಯಾವುದೇ ಕಾರಣಕ್ಕೂ ದೊಡ್ಡದೊಡ್ಡ ಪಾತ್ರೆಗಳಲ್ಲಿ ತುಂಬಿಕೊಂಡು ಊಟ ಬಡಿಸುವುದು. ಕಡ್ಡಾಯವಾಗಿ ಶಾಲಾ ಕಾರಿಡಾರಿನಲ್ಲಿಯೇ ಅಥವಾ ತರಗತಿ ಕೋಣೆಯೋಳಗೆ ಮಕ್ಕಳು ಕುಳಿತು ಊಟ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು. ಯಾವುದೇ ಕಾರಣಕ್ಕೂ ಮಕ್ಕಳು ಪಾತ್ರೆ ಮುಂದೆ ನಿಂತು ಊಟವನ್ನು ತಟ್ಟೆಗೆ ಹಾಕಿಸಿಕೊಳ್ಳುವುದನ್ನು ನಿಷೇಧಿಸಿದೆ. ಕಾರಿಡಾರ್ ಅಥವಾ ಕೋಣೆ ಯೊಳಗೆ ಊಟ ಬಡಿಸಬೇಕು. ಮಕ್ಕಳು ಕುಳಿತು ಊಟ ಮಾಡಬೇಕು. ಹೆಚ್ಚು ಮಕ್ಕಳಿದ್ದಲ್ಲಿ ಸರದಿ ಪ್ರಕಾರ ಊಟ ನೀಡುವುದು. ಊಟದ ಬೆಲ್ ಆದ ತಕ್ಷಣ ಆಯಾ ತರಗತಿಯ ಶಿಕ್ಷಕರು ಅವರವರ ತರಗತಿ ಕೋಣೆಯೊಳಗೆ ಧಾವಿಸಿ ಮುಂದೆ ನಿಂತು ಮಕ್ಕಳು ತರಗತಿ ಕೋಣೆಯಿಂದ ಹೊರಟು ಹೊರಗಡೆ ಊಟದ ಕಾರಿಡಾರ್ ವರೆಗೆ ಬಂದು ಕ್ರಮವಾಗಿ ಕುಳಿತುಕೊಂಡು ಊಟವನ್ನು ಪಡೆದು ಊಟಮಾಡಿ ಮತ್ತೆ ಕೈ ತಟ್ಟೆ ತೊಳೆದುಕೊಂಡು ತರಗತಿ ಕೋಣೆಗೆ ಹೋಗಿ ಅವರ ತಟ್ಟೆಗಳನ್ನು ಇಡಲು ಹೋಗುವವರೆಗೆ ಉಸ್ತುವಾರಿ ವಹಿಸಲು ತರಗತಿ ಶಿಕ್ಷಕರಿಗೆ ಮುಖ್ಯ ಶಿಕ್ಷಕರು ಸೂಕ್ತ ಆದೇಶವನ್ನು ಮೆಮೊ ಮೂಲಕ ನೀಡಲು ಸೂಚಿಸಿದೆ. ತರಗತಿ ಶಿಕ್ಷಕರು ರಜೆ ಇದ್ದಾಗ ಈ ಉಸ್ತುವಾರಿ ಕೆಲಸವನ್ನು ಬೇರೆ ಶಿಕ್ಷಕರಿಗೆ ತಪ್ಪದೇ ಬೆಳಗಿನ ಅವಧಿಯಲ್ಲಿಯೇ ಮುಖ್ಯ ಶಿಕ್ಷಕರು ಮೆಮೊ ಮೂಲಕ ಆದೇಶ ನೀಡಬೇಕು.ಯಾವುದೇ ಕೆಲಸವಿದ್ದರೂ ಅದನ್ನು ಬಿಟ್ಟು ಮುಖ್ಯಶಿಕ್ಷಕರು ಹಾಗೂ ತರಗತಿ ಶಿಕ್ಷಕರು/ದೈಹಿಕ ಶಿಕ್ಷಕರು/ಊಟದ ವೇಳೆಯಲ್ಲಿ ಕಡ್ಡಾಯವಾಗಿ ಊಟದ ವಿತರಣೆಯ ಉಸ್ತುವಾರಿ ವಹಿಸಿ, ಯಾವುದೇ ಸಮಸ್ಯೆಯಿಲ್ಲದಂತೆ ಮಕ್ಕಳು ಊಟ ಪಡೆಯುವಂತೆ ಕ್ರಮ ವಹಿಸುವುದು. ಊಟದ ವೇಳೆಯಲ್ಲಿ ಎಲ್ಲಾ ಶಿಕ್ಷಕರು ಹಾಗೂ ಅಡುಗೆಯವರೂ ಕಡ್ಡಾಯವಾಗಿ ಹಾಜರಿದ್ದು, ಮುಂದೆ ನಿಂತು ಊಟದ ಉಸ್ತುವಾರಿ ನಿರ್ವಹಿಸುವುದನ್ನು ಕಡ್ಡಾಯ ಗೊಳಿಸಲಾಗಿದೆತಾಲ್ಲೂಕು ಮಟ್ಟ :
ತಾಲ್ಲೂಕು ಮಟ್ಟದಲ್ಲಿ ಅಸಿಸ್ಟೆಂಟ್ ಕಮಿಷನರ್ ರವರ ನೇತೃತ್ವದಲ್ಲಿ ತಾಲ್ಲೂಕು ಪಂಚಾಯತ್ ನಲ್ಲಿ ಉಸ್ತುವಾರಿ ಹಾಗೂ ಪರಾಮರ್ಶ ಸಮಿತಿ ಇದ್ದು, ಪ್ರತೀ ತ್ರೈ ಮಾಸಿಕಕ್ಕೊಮ್ಮೆ ಸಭೆ ನಡೆಸಲಾಗುತ್ತದೆ. ಜೊತೆಗೆ ಕಾರ್ಯಕ್ರಮದ ಅನುಷ್ಠಾನ ಹಾಗೂ ಮೇಲುಸ್ತುವಾರಿಯನ್ನು ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಗಳು ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಅಧೀನದಲ್ಲಿ ಸಹಾಯಕ ನಿರ್ದೇಶಕರು(ಅಕ್ಷರ ದಾಸೋಹ) ಕಾರ್ಯಕ್ರಮದ ಅನುಷ್ಠಾನದಲ್ಲಿ ನೆರವಾಗಲು ಕಾರ್ಯನಿರ್ವಹಿತ್ತಿದ್ದಾರೆ.
ಕ್ಷೇತ್ರಶಿಕ್ಷಣಾಧಿಕಾರಿಗಳು ಎಲ್ಲಾ ಶಾಲೆಗಳಿಂದಲೂ ಫಲಾನುಭವಿ ಮಕ್ಕಳ ಸಂಖ್ಯೆಗನುಗುಣವಾಗಿ ಬೇಡಿಕೆ ಮತ್ತು ಉಪಯೋಗಿತಾ ಪ್ರಮಾಣ ಪತ್ರವನ್ನು ಸಂಗ್ರಹಿಸಿ ಕ್ರೋಢೀಕರಿಸಿ, ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರಿಗೆ ತಲುಪಿಸುವುದು. ಅವರು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಸಹಾಯ ಪಡೆದುಕೊಂಡು ಶಾಲಾ ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಫಲಾನುಭವಿಗಳ ವಿವರವಾದ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಗೆ ತಲುಪಿಸುವುದು. ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯಿಂದ ಪಡೆದುಕೊಂಡ ಮಾತ್ರೆಗಳನ್ನು ಸಿ.ಆರ್.ಪಿ.ಗಳ ಮೂಲಕ ಶಾಲಾ ಮಕ್ಕಳಿಗೆ ವಿತರಿಸಬೇಕು.
ಜಿಲ್ಲಾ ಮಟ್ಟ :
ಜಿಲ್ಲಾಧಿಕಾರಿಗಳ/ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಚಾಲನಾ ಮತ್ತು ಪರಾಮರ್ಶನ ಸಮಿತಿ ಇದ್ದು, ಪ್ರತೀ ತ್ರೈಮಾಸಿಕಕ್ಕೊಮ್ಮೆ ಸಭೆ ನಡೆಸಲಾಗುತ್ತದೆ ಹಾಗೂ ಇದರಿಂದ ಕಾರ್ಯಕ್ರಮದ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ನಿರ್ವಹಿಸಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮಕ್ಕೆ ಉಪನಿರ್ದೇಶಕರು ಸಹಕಾರ ನೀಡಬೇಕು. ಇವರು ಜಿಲ್ಲೆ ಮತ್ತು ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು. ಆಹಾರ ಸಾಮಗ್ರಿಗಳು ಹಾಗೂ ಅನುದಾನದ ಉಪಯೋಗಿತ ಪ್ರಮಾಣ ಪತ್ರಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಸಂಗ್ರಹಿಸಿ, ಕ್ರೋಢೀಕರಿಸಿ, ರಾಜ್ಯ ಅನುದಾನದ ಯೋಜನೆ ಕೇಂದ್ರ ಕಛೇರಿಯ ಜಂಟಿ ನಿರ್ದೇಶಕರಿಗೆ ತಲುಪಿಸಬೇಕು. ಅಡುಗೆ ಕೋಣೆ ನಿರ್ಮಾಣ ಹಾಗೂ ಪ್ರಗತಿಯನ್ನು ಪರಿಶೀಲಿಸಬೇಕು. ಅಗ್ನಿನಂದಕ ಅಳವಡಿಕೆ ಬಗ್ಗೆ ಗಮನಹರಿಸಿ ಕಡ್ಡಾಯವಾಗಿ ಎಲ್ಲಾ ಸರ್ಕಾರಿ,ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲೂ ಅಳವಡಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.ರಾಜ್ಯ ಮಟ್ಟ :
ರಾಜ್ಯ ಮಟ್ಟದಲ್ಲಿ ಚಾಲನಾ ಮತ್ತು ಪರಾಮರ್ಶ ಸಮಿತಿ, ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದು, ಸದರಿ ಸಭೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ.