ಸ್ಥಾಪನೆ :
ಶಿಕ್ಷಕರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರವು ಧಾರ್ಮಿಕ ಮತ್ತು ದತ್ತಿ ನಿಯಮ 1890ರ ಅನ್ವಯ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನವನ್ನು 1962 ರಲ್ಲಿ ಸ್ಥಾಪನೆ ಮಾಡಿದೆ. ಪ್ರತಿಯೊಂದು ರಾಜ್ಯದಲ್ಲೂ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದ ರಾಜ್ಯ ಘಟಕವು ಕಾರ್ಯ ನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವು 1963 ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯನ್ನು ಮತ್ತು ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿದೆ. ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗಾಗಿ ಅನೇಕ ಪ್ರಯೋಜನಾಕಾರಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದರ ಮೂಲಕ ರಾಷ್ಟ್ರದಲ್ಲೇ ಇದೊಂದು ಮಾದರಿಯ ಉಪಕ್ರಮವಾಗಿದೆ.
ಆಡಳಿತ :
ಮೇಲ್ಕಂಡ ಮೂರು ನಿಧಿಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಸರ್ಕಾರವು ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸರ್ಕಾರದ ವಿವಿಧ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರನ್ನು ಒಳಗೊಂಡಂತೆ ರಾಜ್ಯ ಸಮಿತಿಯನ್ನು ರಚಿಸಿದೆ. ಈ ಮೂರು ನಿಧಿಗಳಿಗೆ ಹಾಗು ಸಮಿತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಕಾರ್ಯದರ್ಶಿ ಮತ್ತು ಖಜಾಂಚಿಗಳಾಗಿರುತ್ತಾರೆ. ಈ ಮೂರು ನಿಧಿಗಳ ದೈನಂದಿನ ಮೇಲ್ವಿಚಾರಣೆ ಹಾಗು ರೂಪಿತ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರ ವೃಂದದ ಅಧಿಕಾರಿಯನ್ನು ಪ್ರಭಾರಾಧಿಕಾರಿಯಾಗಿ ನಿಯೋಜನೆಯ ಮೇರೆಗೆ ನೇಮಿಸಲಾಗುತ್ತಿದೆ.
ಆದಾಯ ಮೂಲ :
ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನಕ್ಕೆ ನಮ್ಮ ಹಿಂದಿನ ರಾಷ್ಟ್ರಪತಿಗಳು ಹಾಗೂ ದೇಶ ಕಂಡ ಅಪ್ರತಿಮ ದಾರ್ಶನಿಕ ವ್ಯಕ್ತಿಗಳಲ್ಲೊಬ್ಬರಾದ ಡಾ:ಸರ್ವೇಪಲ್ಲಿ ರಾಧಾಕೃಷ್ಣನ್ ರವರ ನೆನಪಿನಲ್ಲಿ ಪ್ರತಿವರ್ಷ ಸೆಪ್ಟಂಬರ್ 5 ರಂದು ಆಚರಿಸಲಾಗುವ “ಶಿಕ್ಷಕರ ದಿನಾಚರಣೆ’’ ಸಂದರ್ಭದಲ್ಲಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಾವುಟಗಳನ್ನು ಮಾರುವ ಮೂಲಕ ವಂತಿಗೆಯನ್ನು ಸಂಗ್ರಹಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಗಳಿಗೆ ಪ್ರೌಢಶಾಲಾ ಹಾಗೂ ಮೇಲ್ಪಟ್ಟ ಹಂತದ ವಿದ್ಯಾರ್ಥಿಗಳಿಂದ ಪ್ರತಿ ವರ್ಷ ವಂತಿಗೆ ಸಂಗ್ರಹಿಸಲಾಗುತ್ತಿದೆ. ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯ ಹಾಗು ಇತರೆ ವೃತ್ತಿಪರ ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಂದ ಅಜೀವ ಸದಸ್ಯತ್ವ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಈ ರೀತಿ ಸಂಗ್ರಹಿಸುವ ಹಣವನ್ನು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಬಳಸಲಾಗುತ್ತದೆ.