ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳು :

1) ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆ/ ಪದವಿ ಪೂರ್ವ ಕಾಲೇಜುಗಳಿಗೆ ಪ್ರೋತ್ಸಾಹಧನ :

ಎಸ್.ಎಸ್.ಎಲ್.ಸಿ/ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ 30 ಕ್ಕಿಂತ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿರುವಂತಹ  ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರೂ. 10,000/-ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ. ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅಭಿನಂದನಾ ಫಲಕ ನೀಡಿ ಜಿಲ್ಲಾ ಮಟ್ಟದಲ್ಲಿ ಗೌರವಿಸಲಾಗುತ್ತಿದೆ.

2) ಎನ್.ಟಿ.ಎಸ್.ಇ ವಿದ್ಯಾರ್ಥಿ ವೇತನ :

ರಾಜ್ಯಮಟ್ಟದ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ (ಎನ್.ಟಿ.ಎಸ್.ಇ) ಉತ್ತೀರ್ಣರಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯ  ವತಿಯಿಂದ ವಾರ್ಷಿಕ ರೂ.2,000/- ರಂತೆ ಎರಡು ವರ್ಷಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

3) ಅರ್ಹ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ/ಪರೀಕ್ಷಾ ಶುಲ್ಕ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ:

ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಗೆ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ವಂತಿಗೆಯ ಶೇ.50 ಭಾಗವನ್ನು ಮತ್ತು ಪದವಿ ಪೂರ್ವ ಕಾಲೇಜು(ಪಿಯುಸಿ), ಪ್ರಥಮ ದರ್ಜೆ ಹಾಗೂ ಇನ್ನಿತರೆ ಕಾಲೇಜುಗಳಿಂದ ಸಂಗ್ರಹಿಸಿದ ವಂತಿಗೆಯ ಶೇ.60 ಭಾಗವನ್ನು ಆಯಾ ಶಾಲಾ ಕಾಲೇಜುಗಳಲ್ಲಿ ಉಳಿಸಿಕೊಂಡು ವಿದ್ಯಾರ್ಥಿಗಳ ವಿದ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಉಪಯೋಗಿಸಿಕೊಳ್ಳಲು ಸಂಬಂಧಿಸಿದ ಶಾಲಾ / ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ.

4) ಶೌರ್ಯ ಪ್ರಶಸ್ತಿ :

ಅಪಾಯ ಸನ್ನಿವೇಶಗಳಲ್ಲಿ ಅಸಾಧಾರಣ ಧೈರ್ಯ, ಸಮಯ ಪ್ರಜ್ಞೆ ಮತ್ತು ಸಾಹಸ ಪ್ರದರ್ಶಿಸಿ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಧಿಯ ವತಿಯಿಂದ ರೂ. 2,500/- ಗಳ ನಗದು ಪುರಸ್ಕಾರ ನೀಡಲಾಗುವುದು.

5) ಕ್ರೀಡಾ ಪ್ರಶಸ್ತಿ :

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗುವ ಶಾಲಾ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಮೂರು ಪ್ರಶಸ್ತಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ. 3,000/-, ರೂ. 2,500/- ಹಾಗೂ ರೂ.2,000/- ಗಳನ್ನು ವೈಯಕ್ತಿಕ ಬಹುಮಾನವಾಗಿ ಹಾಗೂ ಪ್ರಥಮ ಮೂರು ಪ್ರಶಸ್ತಿಗಳನ್ನು ಗೆದ್ದ ತಂಡಗಳಿಗೆ ಕ್ರಮವಾಗಿ ರೂ.2,000/-, ರೂ.1,500/- ಹಾಗೂ ರೂ.1,000/- ಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ.

6) ವಿದ್ಯಾರ್ಥಿಗಳಿಗೆ “ಸುರಕ್ಷಾ ಪರಿಹಾರ ಯೋಜನೆ’’:

ಅಪಘಾತಗಳಿಂದ ಮೃತ ಹೊಂದಿದ ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಹಂತದವರೆಗೆ ವ್ಯಾಸಂಗ ಮಾಡುತ್ತಿರುವ ರೆಗ್ಯೂಲರ್ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ “ವಿದ್ಯಾರ್ಥಿ ಸುರಕ್ಷಾ ಪರಿಹಾರ ಯೋಜನೆ” ಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ವಿದ್ಯಾರ್ಥಿಯ ಪೋಷಕರಿಗೆ ರೂ. 50,000/- ಪರಿಹಾರ ಧನ ನೀಡಲಾಗುತ್ತಿದೆ.

7) ವಿದ್ಯಾರ್ಥಿಗಳಿಗೆ ವೈದ್ಯಕೀಯ ಧನಸಹಾಯ :

ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಹಂತದವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಖಾಯಿಲೆಯ ತೀವ್ರತೆಯನ್ನು ಆಧರಿಸಿ ಗರಿಷ್ಠ ರೂ. 50,000/-ಗಳ ಮಿತಿಗೊಳಪಟ್ಟು ವೈದ್ಯಕೀಯ ಧನಸಹಾಯವನ್ನು ನೀಡಲಾಗುತ್ತಿದೆ.

ಎ) ಜಿಲ್ಲಾ ಮಟ್ಟದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ :

ಜಿಲ್ಲಾ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕೆಳಕಂಡಂತೆ ನಗದು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

         ಎಸ್.ಎಸ್.ಎಲ್.ಸಿ-ಪ್ರತಿ ಜಿಲ್ಲೆಗೆ ರೂ. 2,000/- ದಂತೆ         -      10 ಪ್ರಶಸ್ತಿ

         ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ                               -      05 ಪ್ರಶಸ್ತಿ

         ಇತರೆ ಮಾಧ್ಯಮ ವಿದ್ಯಾರ್ಥಿಗಳಿಗೆ                               -      05 ಪ್ರಶಸ್ತಿ

          ಪಿಯುಸಿ - ಪ್ರತಿ ಜಿಲ್ಲೆಗೆ ರೂ.3,000/- ದಂತೆ                -      06 ಪ್ರಶಸ್ತಿ

         ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ                             -        02 ಪ್ರಶಸ್ತಿ

         ಕಲಾ ವಿಷಯದ ವಿದ್ಯಾರ್ಥಿಗಳಿಗೆ                                -       02 ಪ್ರಶಸ್ತಿ

         ವಾಣಿಜ್ಯ ವಿಷಯದ ವಿದ್ಯಾರ್ಥಿಗಳಿಗೆ                              -       02 ಪ್ರಶಸ್ತಿ

ಏ) ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಹ-ಪಠ್ಯ ಚಟುವಟಿಕೆಗಳು :

ರಾಜ್ಯದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳ ಆಯೋಜನೆಗೆ ನಿಧಿಗಳಿಂದ ಅನುದಾನವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಬಿಡುಗಡೆ ಮಾಡಲಾಗುತ್ತದೆ.  ಚಟುವಟಿಕೆಗಳ ರೂಪುರೇಷೆ ಹಾಗೂ ಆಯೋಜನೆಯನ್ನು ಪದವಿ ಪೂರ್ವ ಶಿಕ್ಷಣ  ಇಲಾಖೆಯೇ ಮಾಡುತ್ತದೆ.